Saturday 28 November 2015

ಕನ್ನಡ ಸಾರಸ್ವತ ಲೋಕದ ಮೇರು ಶಿಖರ ನವೋದಯದ ಕಾವ್ಯ ಶಿಲ್ಪಿ ಪುತಿನ.

ಪುತಿನ
(17.03.1905-13.10.1998)

ಕನ್ನಡದ ಶ್ರೇಷ್ಠ ಗೀತ ನಾಟಕಗಾರಕನ್ನಡದ ಖ್ಯಾತ ವಿದ್ವಾಂಸನವೋದಯ ಕಾವ್ಯ ಶಿಲ್ಪಿಕವಿಪುಂಗವವಾಗ್ಗೇಯಕಾರಬಹುಮುಖ ಪ್ರತಿಭೆಯ ಕನ್ನಡ ಸಾರಸ್ವತ ಲೋಕದಲ್ಲಿ ಮೇರು ಶಿಖರವೆನಿಸಿರುವ ಹಿರಿಯ ಕಾವ್ಯ ಚೇತನ ಹುಟ್ಟಿದ ದಿನವೂ ಒಂದು ವಿಶೇಷವಾದ ದಿನಕೃಷ್ಣಪ್ರಜ್ಞೆಯ     ಪುತಿನ ಅವರು ಮೇಲುಕೋಟೆಯ ಚೆಲುವ ನಾರಾಯಣನೊಂದಿಗೆ ಹುಟ್ಟಿದ ದಿನದಿಂದಲೇ ನಂಟನ್ನು   ಬೆಸೆದು ಕೊಂಡು ಬಂದವರು. ಅವರು ಜನಿಸಿದ್ದು ಜಗದ್ಪ್ರಸಿದ್ಧವಾದ ವೈರಮುಡಿ ಉತ್ಸವದ ದಿನ. 1905 ಮಾರ್ಚ್
17 ರಂದು. ವರ ಪೂರ್ಣ ಹೆಸರು ಪುರೋಹಿತ ತಿರುನಾರಾಯಣ ನರಸಿಂಹಾಚಾರ್ತಂದೆ ವೃತ್ತಿಯಿಂದ ವೈದಿಕರಾಗಿದ್ದ ತಿರುನಾರಾಯಣ ಅಯ್ಯಂಗಾರ್ತಾಯಿ ಶ್ರೀರಂಗಮ್ಮಮನೆ ಮನ ತುಂಬಿದ ಮಡದಿ ಹೆಮ್ಮಗಿಯ ಶೇಷಮ್ಮನವರು


ಚಿಂತನಶೀಲ, ಸೃಜನಶೀಲ ಮನಸ್ಸಿನ ಕವಿಪುಂಗವ ಪುತಿನ ಅವರು ಹುಟ್ಟಿ ಬೆಳೆದದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಒಂದು ಹಳ್ಳಿಯಾದ ಮೇಲುಕೋಟೆಯಲ್ಲಿಪುತಿನ ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವು ಹುಟ್ಟೂರಿನಲ್ಲಿಯೇ  ಜರುಗಿತುತಂದೆಯರಿಂದ ಶಾಸ್ತ್ರೀಯವಾಗಿ ಸಂಸ್ಕೃತವನ್ನು ವ್ಯಾಸಂಗಮಾಡಿದರುಕಾಲೇಜಿನ ವ್ಯಾಸಂಗಕ್ಕಾಗಿ ಮೈಸೂರಿಗೆ ಬಂದರು. 1926ರಲ್ಲಿ ಬಿ.ಎ. ಪದವೀದರರಾದರು. ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದರು. ಸೈನ್ಯದ ಮುಖ್ಯಾಕಾರಿಗಳ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದ ಪುತಿನ ಅವರು, ಶಾಸನ ಸಭಾ ಕಚೇರಿಯಲ್ಲಿ (ಮೈಸೂರು ಸಂಸ್ಥಾನದ ಲೆಜಿಸ್ಲೇಚರ್‌ ಇಲಾಖೆ) ಸಂಪಾದಕರಾಗಿ ನಿವೃತ್ತರಾದರು. ನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶಕ್ಕಾಗಿ ಮತ್ತು ಇಂಗ್ಲಿಷ್-ಕನ್ನಡ ನಿಘಂಟುವಿನ ಸಂಪಾದಕರಾಗಿ ಸೇವೆಸಲ್ಲಿಸಿದರು. ವಿಮರ್ಶಕರು, ನಾಟಕಕಾರರು, ಸಂಶೋಧಕರು ಹಾಗೂ ಪ್ರಬಂಧ ಲೇಖಕರು. ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ
ಕಲ್ಪನಾ ಸೌಂದರ್ಯ, ನಿರೂಪಣೆಯ ಕೌಶಲವನ್ನು ಮೆರೆಸಿ, ಸತ್ವಪೂರ್ಣ ಸಾಹಿತ್ಯದ ರಸದೌತಣವನ್ನು ಕನ್ನಡಿಗರಿಗೆ ನೀಡಿದ ಪುತಿನ ಅವರ ಕಾವ್ಯಗಳಿಗೆ ಮೇಲುಕೋಟೆ, ಮೈಸೂರು, ಹೆಮ್ಮಗಿ ಹಾಗೂ ಬೆಂಗಳೂರಿನ ಮಲ್ಲೇಶ್ವರಂ ಪರಿಸರಗಳು ಸ್ಫೂರ್ತಿನೀಡಿದವು. ಮೇಲುಕೋಟೆಯ ಬೆಟ್ಟ, ತೊರೆ, ಕಣಿವೆ, ಕಾಡು, ಗುಡಿಗಳು ಪುತಿನ ಅವರ ಕಾವ್ಯದ ವಸ್ತುಗಳಾಗಿವೆ. ಪುಷ್ಕರಣಿ, ದೇವಾಲಯ ಬೆಟ್ಟಗುಡ್ಡಗಳ ಸಾಲಿನಲ್ಲಿ ಮನುಷ್ಯ ಸಂಬಂಧವನ್ನು ಅರಸಿ,ತಮ್ಮ ಅನುಭವಾಮೃತಗಳನ್ನು ಸಾಹಿತ್ಯದಲ್ಲಿ ಬೆಳಕಿಗೆ ತಂದ ಸರಸ್ವತಿ ಪುತ್ರನ ಮೆಚ್ಚಿನ ಮೇಲುಕೋಟೆ ಇಂದಿಗೂ ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇದು 40ಕ್ಕೂ ಹೆಚ್ಚು ಧಾರ್ಮಿಕ ಸನ್ನಿಧಾನಗಳಿಂದ ಕೂಡಿದೆ. ಇವೆಲ್ಲೂ ಪುತಿನ ಸಾಹಿತ್ಯದ ಮೇಲೆ ತಮ್ಮ ಪ್ರಭಾವವನ್ನು ಬೀರಿವೆ.
ಮೇಲುಕೋಟೆಯಲ್ಲಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳು
  • ಅಹೋಬಲ ನರಸಿಂಹ ಸ್ವಾಮಿ ಸನ್ನಿಧಿ
  • ಆಂಜನೇಯ ದೇವಾಲಯ(ಅಕ್ಕ ತಂಗಿಯರ ಹೊಂಡ)
  • ಆದಿಶೇಷ ಸನ್ನಿಧಿ
  • ಕರಣಿಕ ನಾರಾಯಣನ ದೇವಾಲಯ
  • ಕರಿಗಲ್ ಆಂಜನೇಯ ದೇವಾಲಯ
  • ಕಾಳಮ್ಮನ ದೇವಾಲಯ
  • ಕುಲಶೇಖರ್ ಆಳ್ವಾರ್ ಸನ್ನಿಧಿ
  • ನಯನಕ್ಷೇತ್ರ(ಪಾಂಡವರು ವಾಸವಾಗಿದ್ದ ಗುಹೆಗಳು)
  • ಕೇಶವನ್ ಕೋವಿಲ್
  • ಗರುಡ ದೇವರ ದೇವಾಲಯ
  • ಗುಪ್ತಾ ಸತ್ರ
  • ಚೆಲುವನಾರಾಯಣ ಸ್ವಾಮಿ ದೇವಸ್ಥಾನ                        
  • ಜೀಯರ್ ಸನ್ನಿಧಿ(ಮಣವಾಳ ಮಾಮುನಿ ಜಿಯರ್ ಸನ್ನಿಧಿ)
  • ತಿರುಮಂಗೈ ಆಳ್ವಾರ್ ಸನ್ನಿಧಿ
  • ತೇರು ಮನೆ
  • ದತ್ತ ನಾರಾಯಣ ದೇವಾಲಯ
  • ನಂಜೀಯರ್ ಸನ್ನಿಧಿ
  • ನಮ್ಮಾಳ್ವಾರ್ ಸನ್ನಿಧಿ
  • ಪಂಚ ಭಾಗವತ ಕ್ಷೇತ್ರ ಸನ್ನಿಧಿ
  • ಪಟ್ಟಾಭಿರಾಮ ದೇವಾಲಯ
  • ಪರಕಾಲ ಮಠ
  • ಕೋಟೆ ಆಂಜನೇಯ ಸನ್ನಿಧಿ
  • ಶ್ರೀಕೃಷ್ಣದೇವರ ದೇವಾಲಯ
  • ಪೇಯಾಳ್ವಾರ್ ಸನ್ನಿಧಿ
  • ಬದರಿ ನಾರಾಯಣ ದೇವಾಲಯ
  • ಬಿಂದು ಮಾಧವ ದೇವಾಲಯ
  • ಮಾರಮ್ಮನ ಗುಡಿ
  • ಮೂಡ ಬಾಗಿಲು ಆಂಜನೇಯ ದೇವಾಲಯ
  • ಯತಿರಾಜ ಮಠ
  • ಯೋಗಾನರಸಿಂಹ ಸ್ವಾಮಿ ದೇವಸ್ಥಾನ
  • ರಾಯಗೋಪುರ ಆಂಜನೇಯ ದೇವಾಲಯ
  • ಲಕ್ಷ್ಮಿನಾರಾಯಣ ಸನ್ನಿಧಿ
  • ಏಕಶಿಲಾ ಗಣಪತಿ ದೇವಾಲಯ
  • ಭೂವರಾಹ ಸನ್ನಿಧಿ
  • ವರನಂದಿ ಮಂಟಪ (ಬಿಬಿ ನಾಚಿಯಾರ್)
  • ವಾನಮಾಮಲೆ ಮಠ
  • ವೇದಾಂತದೇಶಿಕರ ಸನ್ನಿಧಿ
  • ಶ್ರೀನಿವಾಸ ದೇವಾಲಯ
  • ಶನೇಶ್ವರ ದೇವಾಲಯ
  • ಶಾಂಡಿಲ್ಯದ ಸನ್ನಿಧಿ
  • ಶಿವನ ದೇವಾಲಯ(ಹುಳ್ಳಿಬಾವಿ)
  • ಸೀತಾರಣ್ಯ ಕ್ಷೇತ್ರ
  • ಸುಗ್ರೀವನ ದೇವಾಲಯ
  • ಹನುಮಾನ್ ದೇವಾಲಯ
  • ಲಕ್ಷ್ಮೀ ಹಯಗ್ರೀವ ಸನ್ನಿಧಿ
  • ಹೊರತಮ್ಮನ ದೇವಾಲಯ
  • ವಿಶ್ವತ್ಸೇನ ಸನ್ನಿಧಿ
  • ಅಷ್ಟತೀರ್ಥ
  • ಪಂಚಕಲ್ಯಾಣಿ
  • ವೈಕುಂಠಗಂಗೆ (ತೊಟ್ಟಿಲುಮಡುವು)
  • ಖಾದ್ರಿ ಶಾಮಣ್ಣ ಗ್ರಂಥಾಲಯ
  • ಜನಪದ ವಿದ್ಯಾಲಯ    (ಇವುಗಳ ಜೊತೆಗೆ ಪುತಿನ ಸ್ಮಾರಕ ಭವನವು ಸೇರಿಗೊಂಡು, ಮೇಲುಕೋಟೆಯನ್ನು ಒಂದು ಸಾರಸ್ವತ ತೀರ್ಥ ಕ್ಷೇತ್ರವನ್ನಾಗಿಸಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.)
ಮೇಲುಕೋಟೆಯ ಆಧ್ಯಾತ್ಮಿಕ ಪರಿಸರವು ಪುತಿನ ಅವರ ಸಾಹಿತ್ಯ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿರುವಂತೆಯೇ, ಪಂಚಪ್ರಾಣವಾಗಿದ್ದ ಆರಾಧ್ಯ ದೇವರು ಅವರ ಸಾಹಿತ್ಯ ಕೃಷಿಗೆ ಪ್ರೇರಣೆಯಾಗಿದೆ. ಲೌಕಿಕ ಮತ್ತು ಅಲೌಕಿಕಗಳೆರಡರ ಅರಿವು ಕಾವ್ಯವನ್ನು ಗಟ್ಟಿಗೊಳಿಸಿವೆ. ಪ್ರಕೃತಿ ಮತ್ತು ಪ್ರಕೃತಿಯಲ್ಲಿನ ದೈವತ್ವದ ಹುಡುಕಾಟ ಅವರ ಕಾವ್ಯದಲ್ಲಿ ಅಂತರ್ಗತವಾಗಿದೆ. ನಾಡಿನ ಸಂಸ್ಕೃತಿ ಸಾಹಿತ್ಯ ಸೃಷ್ಟಿಗೆ ಇಂಬು ನೀಡಿದೆ. ಅವರ ಕಾವ್ಯ ಶಕ್ತಿ ಜನರ ಭಾವನೆಗಳಿಗೆ ನಿಲುಕುವಂತಿದ್ದು ಬೌದ್ಧಿಕ ಚಿಂತನೆಗೆ ತೊಡಗಿಸುವ ಸತ್ವವುಳ್ಳದ್ದಾಗಿವೆ. ಹಳೆಯದು ಹೊಸದಾದರೆ ಮಾತ್ರ ಅದಕ್ಕೊಂದು ಮೌಲ್ಯ ಬರುತ್ತದೆ. ಇಲ್ಲದಿದ್ದರೆ ನಿಂತನೀರಾಗುತ್ತದೆ ಎಂಬ ವಿಚಾರ ಧಾರೆಯು ಪುತಿನ ಅವರದ್ದು. ಅವರ ಚಿಂತನಾಲಹರಿ ಹರಿಯುವ ಬಗೆಯೇ ವಿಶಿಷ್ಟವಾದುದು. ಇವು ಅವರ ಕಾವ್ಯದ ಸತ್ವಕ್ಕೆ ಪುಷ್ಟಿಯನ್ನು ನೀಡಿವೆ. ವಿದ್ಯಾರ್ಥಿ ದೆಸೆಯಲ್ಲೇ ಅವರ ಸಾಹಿತ್ಯ ಕೃಷಿ ಪ್ರಾರಂಭವಾಯಿತು. ಮೈಸೂರು ಮಹಾರಾಜ ಕಾಲೇಜಿನ ಕನ್ನಡ ಸಂಘದ ‘ಕಿರಿಯರ ಕಾಣಿಕೆ’ ಎಂಬ ಸಂಗ್ರಹದಲ್ಲಿ ಪ್ರಕಟಗೊಂಡ ‘ನನ್ನ ನಾಯಿ’ ಕವನ ಪುತಿನ ಅವರ ಮೊದಲ ಕವನ. ಈ ಕವನಕ್ಕೆ ದೊರೆತ ಪ್ರತಿಕ್ರಿಯೆಯಿಂದ ಸೂರ್ತಿಗೊಂಡು ಹಲವಾರು ಕವನಗಳನ್ನು ಬರೆದರು. ಅದರ ಫಲವೆಂಬಂತೆ  ಅವರ ಮೊದಲ ಕವನ ‘ಹಣತೆ’ 1933ರಲ್ಲಿ ಪ್ರಕಟವಾಯಿತು. ನಂತರದ ದಿನಗಳಲ್ಲಿ ಹನ್ನೊಂದು ಕವನ ಸಂಕಲನಗಳನ್ನು, ಹದಿನಾರು ಗೀತ ರೂಪಕಗಳನ್ನು, ಹತ್ತು ಗದ್ಯಚಿತ್ರಗಳನ್ನು ಜೊತೆಗೆ ಕಾವ್ಯಮೀಮಾಂಸೆಯ ಕೃತಿಗಳನ್ನು ರಚಿಸಿದರು.
ಮಾಸ್ತಿಯವರ ಮಾತಿನಲ್ಲಿ ಹೇಳುವುದಾದರೆ ‘ಪುತಿನ ಅವರ ಕಾವ್ಯ ಮೊನಚಾದುದು, ಹಾಗೆಯೇ ನೆಲೆಯರಿತುದು, ಜೀವನಾನುಕೂಲವಾದುದು, ಹಾಗೆಯೇ ತೀವ್ರವಾದದ್ದು, ಮಾತು ಮುದ್ದಾದುದು, ಅದರೂ ಅತ್ಯಂತ ಬಲವುಳ್ಳದ್ದು. ಪುತಿನ ಅವರ ಕಾವ್ಯದಲ್ಲಿ ನಮ್ಮ ನಾಡು ನುಡಿಯುತ್ತದೆ, ನಮ್ಮ ಸಂಸ್ಕೃತಿ ಅರಳುತ್ತದೆ’ ಪುತಿನ ಅವರ ಕಾವ್ಯಗಳನ್ನು ಭಕ್ತಿಯಿಂದ ಓದಿದವರಿಗೆ ಈ ಅನುಭವ ಆಗದೇ ಇರದು.
ಪುತಿನ ಅವರ ಪ್ರಮುಖ ಕೃತಿಗಳು
ಹಣತೆಯಿಂದ ಆರಂಭಗೊಂಡು `ಹಣತೆಯ ಹಾಡು’ ಕವನ ಸಂಕಲನದವರೆಗೆ ಪು.ತಿ.ನ. ಅವರು ಒಟ್ಟು ಹನ್ನೊಂದು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
·       ಹಣತೆ,
·       ಮಾಂದಳಿರು,
·       ಶಾರದ ಯಾಮಿನಿ,
·       ಗಣೇಶ ದರ್ಶನ,
·       ರಸ ಸರಸ್ವತಿ,
·       ಮಲೆ ದೇಗುಲ,
·       ಹೃದಯ ವಿಹಾರಿ,
·       ಇರುಳು ಮೆರುಗು,
·       ಹಳೆಯ ಬೇರು ಹೊಸ ಚಿಗುರು,
·       ಎಂಬತ್ತರ ನಲುಗು.
·       ಹಣತೆಯ ಹಾಡು (ಕನ್ನಡ ಸಂಘಕ್ರೈಸ್ಟ್ ಕಾಲೇಜ್ ಪ್ರಕಟಿಣೆ.)
ಉತ್ತಮ ಗೀತನಾಟಕಕಾರರೂ ಆಗಿರುವ ಪು.ತಿ.ನ. ಅವರು ಬರೆದಿರುವ ಸಂಗೀತ ನಾಟಕಗಳು ಮತ್ತು ಪ್ರಖ್ಯಾತ ಗೀತರೂಪಕಗಳು.
ಸಂಗೀತ ನಾಟಕಗಳು:
·       ವಸಂತ ಚಂದನ,
·       ಸೀತಾ ಕಲ್ಯಾಣ
ಪ್ರಖ್ಯಾತ ಗೀತರೂಪಕಗಳು:
·       ಗೋಕುಲ ನಿರ್ಗಮನ, (ಕನ್ನಡದ ಮೇರು ಕೃತಿ)
·       ಶ್ರೀಹರಿಚರಿತೆ,
·       ಅಹಲ್ಯೆ,
·       ಸತ್ಯಾಯನ ಹರಿಶ್ಚಂದ್ರ,
·       ವಿಕಟಕವಿ ವಿಜಯ,
·       ದೋಣಿಯ ಬಿನದ
·       ಶಬರಿ,
·       ಹಂಸದಮಯಂತಿ,
·       ಹರಿಣಾಭಿಸರಣ,
·       ದೀಪಲಕ್ಷ್ಮಿ
·       ಶ್ರೀರಾಮ ಪಟ್ಟಾಭಿಷೇಕಂ
ರಾಮಾಯಣದ ಕಥೆಯನ್ನು ಕೇಳದೆ ಇರುವವರು ಯಾರು? ನಮ್ಮೆಲ್ಲರಿಗೂ ಗೊತ್ತಿರುವ  ರಾಮಾಯಣದ ಕಥೆನ್ನೇ ಆಧರಿಸಿ ಬರೆದಿರುವ ಅಹಲ್ಯೆ, ಶಬರಿ, ಹರಿಣಾಭಿಸರಣ, ಶ್ರೀರಾಮ ಪಟ್ಟಾಭಿಷೇಕ ಮುಂತಾದ ನೃತ್ಯನಾಟಕಗಳು ಪುತಿನ ಅವರು ಹೇಳುವ ವಿಭಿನ್ನರೀತಿ. ಸಂಸ್ಕೃತ ಮಯವಾದ ವೃತ್ತಗಳಿಂದ ಹಿಡಿದು, ಜಾನಪದ ಧಾಟಿಯವರೆಗೂ ಬಳಸಿಕೊಂಡಿರುವ ಲಯ ಗೇಯ ಮಾಧುರ್ಯ ಮನಸ್ಸನ್ನು ಸೂರೆಗೊಳ್ಳುತ್ತವೆ. ಅವರೇ ಹಾಡುಗಳಿಗೆ ಸಂಗೀತವನ್ನೂ ಒದಗಿಸಿಕೊಟ್ಟಿರುವುದರಿಂದ ಪ್ರತಿಯೊಂದು ಹಾಡೂ ಪುನಃಪುನಃ ಕೇಳುವಂತೆ ಪ್ರೇರೇಪಿಸುತ್ತವೆ.
ಹಾಸ್ಯ ಪ್ರಸನ್ನತೆಮಾತುಗಾರಿಕೆಗೆ ಸಾಕ್ಷಿಯಾಗಿರುವ ಪು.ತಿ.ನ.ರವರ ಪ್ರಮುಖ ಪ್ರಬಂಧ ಸಂಕಲನಗಳು.
·       ಈಚಲು ಮರದ ಕೆಳಗೆ,
·       ಗೋಕುಲಾಷ್ಟಮಿ,
·       ಭೀತಿ ಮೀಮಾಂಸೆ,
·       ಧೇನುಕೋಪಾಖ್ಯಾನ,
·       ರಾಮಾಚಾರಿಯ ನೆನಪು,
·       ಮಸಾಲೆದೋಸೆ,
·       ಜಾನ್ಹವಿಗೆ ಜೋಡಿ ದೀವಿಗೆ
·       ರಥಸಪ್ತಮಿ ಮತ್ತು ಇತರ ಕತೆಗಳು.
ಪುತಿನ ಅವರ ಸಮಗ್ರ ಕಾವ್ಯ 1989ರಲ್ಲಿ ಹೊರಬಂದುತು.
ಅಭಿನಂದನ ಗ್ರಂಥಗಳು
·       1981ರಲ್ಲಿ  ‘ಯದುಗಿರಿ’,
·       2002ರಲ್ಲಿ ಸಮಗ್ರ ‘ಗದ್ಯ ಸಂಪುಟ’,
·       2005ರಲ್ಲಿ ‘ಪು.ತಿ.ನ. ನೂರರ ನೆನಪು’.
ಕವಿ ಪುತಿನ ಅವರು ಶಾಸ್ತ್ರೀಯ ಸಂಗೀತದ ಎಲ್ಲಾ ಪ್ರಕಾರಗಳಲ್ಲೂ ಕವಿತೆಗಳನ್ನು ರಚಿಸಿ ವಾಗ್ಗೇಯಕಾರರೂ ಆಗಿದ್ದರು. ಕಾವ್ಯ ಮತ್ತು ಸಂಗೀತ ಮೇಳೈಸಿಕೊಂಡ ಕನ್ನಡದ ಏಕೈಕ ರಚನಕಾರರಾಗಿದ್ದುದು. ಸಂಗೀತಕ್ಕೆ ಪು.ತಿ.ನ.ರವರು ಹಲವು ಹೊಸ ರಾಗಗಳನ್ನು ಕಂಡುಹಿಡಿಯುವುದರ ಮೂಲಕ ಕೊಡುಗೆ ಸಲ್ಲಿಸಿದ್ದಾರೆ ಎಂದು ಪ್ರಖ್ಯಾತ ಸಂಗೀತ ವಿದ್ವಾಸರಾದ ಡಾದೊರೆಸ್ವಾಮಿ ಅಯ್ಯಂಗಾರರು ಮೆಚ್ಚಿಗೆ ಮಾತನ್ನಾಡಿದ್ದಾರೆ. ವಾಸಂತಿಸಂಜೀವಿನಿಹರಿಣಿಋತುವಿಲಾಸಗಾಂಧಾರದೋಲಋಷಭ ವಿಲಾಸ, ಸೌರಾಷ್ಟ್ರ...... ಎಷ್ಟೋ ಪ್ರಸಿದ್ಧ ರಾಗಗಳಲ್ಲೂ, ಇನ್ನೂ ನಾಮಕರಣವಾಗದ ಹಲವಾರು ರಾಗಗಳಲ್ಲೂ,  ಮತ್ತೆ ಕೆಲವು ಇಂತಹದ್ದೇ ಎಂದು ಹೆಸರಿಸಲು ಆಗದೇ ಇರುವಂತಹ ಹೊಸ ಸೊಗಡಿರುವ ರಾಗಗಳಲ್ಲೂ ಅವರ ಲಹರಿ ಹರಿದಿದೆ. ಪುತಿನ ಅವರಿಗೆ ಸಂಗೀತಮಯ ನಾಟಕಗಳ ರಚನೆಗೆ ಪ್ರೇರಣೆ ಸಿಕ್ಕಿದ್ದು ಪೌರಾಣಿಕ ಕಥಾ ಪ್ರಸಂಗಗಳು, ಹರಿಕಥೆಗಳುಅರಮನೆ ಮತ್ತು ಅರಮನೆಯ ನಾಟಕ ಕಂಪೆನಿಗಳಲ್ಲಿದ್ದ ಒಳ್ಳೆಯ ಸಂಗೀತಗಾರರು ಮತ್ತು ಅವರ ಪಾತ್ರ ನಿರ್ವಹಣೆ. ಹಾಡುಗಳಿಂದಲೇ ನಿರ್ವಹಿಸಲ್ಪಟ್ಟ ಕಂಪನಿ ನಾಟಕಗಳು. ಮಾರ್ಷ್ ಶಿವಿಲಿಯರ್‌ನ `Spring time in Paris' ಎಂಬ ಆಧುನಿಕ ಅಪೆರಾ ಮುಂತಾದವು ಪುತಿನರವರನ್ನು ಗೀತರೂಪಕ ನಾಟಕಕಾರರಗುವಲ್ಲಿ ಪ್ರಮುಖ ಪಾತ್ರವಹಿಸಿವೆ.
ಪುತಿನ ಅವರ ಸಮಗ್ರ ಗೇಯ ಕಾವ್ಯ ನಾಟಕಗಳ 827 ಪುಟಗಳ ಸಂಪುಟವೊಂದನ್ನು ಪ್ರತಿಷ್ಠಾನವು ಜೂನ್‌ 1998ರಲ್ಲಿ ಬಿಡುಗಡೆ ಮಾಡಿದೆ.
ಡಾ.ವೀಣಾ ದೊರೆಸ್ವಾಮಿ ಅಯ್ಯಂಗಾರ್‌ ಅವರ ಮುನ್ನುಡಿಯನ್ನೊಳಗೊಂಡ ಈ ಬೃಹತ್‌ ಗ್ರಂಥದಲ್ಲಿ ಪುತಿನ ಅವರ ಎಲ್ಲಾ ಗೀತನಾಟಕಗಳೂ ಇರುವುದಲ್ಲದೆ, ಅನುಬಂಧದಲ್ಲಿ ಆಯಾಯ ರೂಪಕ ಕೃತಿಗಳಿಗೆ ಪ್ರಕಟಿತವಾದಾಗ ಬರೆದ ಮುನ್ನುಡಿ, ಪ್ರಸ್ತಾವನೆಗಳೂ, ಶಬ್ದಾರ್ಥಕೋಶ ಮತ್ತು ಲಘು ಟಿಪ್ಪಣಿಗಳೂ ಕೃತಿಗಳ ಮೊಟ್ಟ ಮೊದಲ ಮುದ್ರಣ ವಿವರಗಳೂ ಇವೆ.

ಪುತಿನ ಅವರ ‘ರಸಪ್ರಕಾಶ’ ಎಂಬ ಹೆಸರಿನ ಕಾವ್ಯಚಿಂತನೆಗಳ ಮುಕ್ತಕಗಳ ಸಂಕಲನವೊಂದನ್ನು ಜನವರಿ 2002ರಲ್ಲಿ ಪ್ರತಿಷ್ಠಾನವು ಪ್ರಕಟಿಸಿದೆ.
ಕವಿ ಪುತಿನ ಅವರೊಂದಿಗೆ ಸಂದರ್ಶನ
ಸಂದರ್ಶಕರು: ವಿ ದೊರೆಸ್ವಾ,ಮಿ ಅಯ್ಯಂಗಾರ್ 
ಆಕಾಶವಾಣಿಯ ಅಮೃತ ಮಹೋತ್ಸವದ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿರುವ ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರು ಆಕಾಶವಾಣಿಗಾಗಿ ಕವಿ ಪು. ತಿ ನರಸಿಂಹಚಾರ್ಯರನ್ನು ಮಾಡಿದ ಸಂದರ್ಶನ.
ದೊರೆ: ನಮಸ್ಕಾರ ನರಸಿಂಹಾಚಾರ್ರೆ
ಪುತಿನ: ನಮಸ್ಕಾರ ದೊರೆಸ್ವಾಮಿ ಅಯ್ಯಂಗಾರ್ರೆ
ದೊರೆ: ಬಹಳ ಸಂತೋಷ ನಿಮ್ಮನ್ನ ಮೈಸೂರು ಆಕಾಶವಾಣಿಯಲ್ಲಿ ನೋಡ್ತಾ ಇರೋದು. ತಾವು ಕಾವ್ಯಪ್ರಪಂಚದಲ್ಲಿ ಒಳ್ಳೆಯ, ಪ್ರತಿಷ್ಠಿತರಾದ ಕವಿಗಳು. ನಿಮ್ಮ ಅನೇಕ ಗೀತರೂಪಕಗಳನ್ನು ನಿರ್ದೇಶನ ಮಾಡುವ ಭಾಗ್ಯ ನನಗೆ ಸಿಕ್ಕಿತ್ತು. ಆವಾಗ ನಿಮ್ಮ ಕವಿತಾಚಾತುರ್ಯ ನೋಡಿ ತುಂಬಾ ಸಂತೋಷಪಟ್ಟಿದ್ದೇನೆ. ಆದರೆ ಈ ಸಂಗೀತದಲ್ಲಿ ನಿಮಗೆ ಅಭಿರುಚಿ ಹ್ಯಾಗೆ ಬಂತು? ನೀವು ಸಂಗೀತ ಕ್ರಮವಾಗಿ ಅಭ್ಯಾಸ ಮಾಡಿದೋರಲ್ಲ. ಗುರುಗಳಿಂದ ಶಿಕ್ಷಣ ಪಡೆದವರಲ್ಲ, ಇದು ನನ್ನನ್ನ ಯಾವಾಗಲೂ ಬಾಧಿಸ್ತಾನೆ ಇದೆ. 
ಪುತಿನ: ಕವಿತೆ ಬರೆಯೋದಕ್ಕೆ ಮೊದಲು ನನಗೆ ಸಂಗೀತದ ಪರಿಚಯ ತುಂಬಾ ಇತ್ತು. ಸಂಗೀತದ ಅಭಿರುಚಿ, ಚಿಕ್ಕಂದಿನಿಂದ ಇತ್ತು. ಇದಕ್ಕೆ ಕಾರಣ ಏನು ಅಂದರೆ ನಮ್ಮೂರ ದೇವಸ್ಥಾನ. ನಮಗೆ ದೇವಸ್ಥಾನ ಅನ್ನತಕ್ಕದ್ದು ಚತುಃಸ್ಥಾನದಲ್ಲಿ ಒಂದು. ಶ್ರೀವೈಷ್ಣವರಿಗೆ ನಾಲ್ಕು ದೇವಸ್ಥಾನಗಳಲ್ಲಿ ಮೇಲುಕೋಟೆ ದೇವಸ್ಥಾನವಂತೂ ನಿತ್ಯಸ್ಮರಣೀಯವಾದ ಒಂದು. ಆದ್ದರಿಂದ ಎಲ್ಲ ಕಡೆಯ ಸಂಗೀತಗಾರರೂ ಬಂದು, ಅಲ್ಲಿ ದೇವರಿಗೆ ತಮ್ಮ ಪ್ರಥಮ ನಿವೇದನೆಯನ್ನು ಮಾಡಿಬಿಟ್ಟು ಹೋಗ್ತಾ ಇದ್ದರು. ನಮ್ಮೂರಿನಲ್ಲಿ ರಸಿಕರು ಇದ್ದರು, ವಿದ್ವಾಂಸರಿದ್ದರು. ವಿದ್ವಾಂಸರು ಶ್ಲೋಕವನ್ನು ಹೇಳಬೇಕಾದರೆ ಯಾವಾಗಲೂ ರಾಗದಲ್ಲೇ ಹೇಳ್ತಾ ಇದ್ದರು. ಪುರಾಣ ಪ್ರವಚನ ಮಾಡಬೇಕಾದರೆ ಅರ್ಥಹೇಳುವವರು ಒಬ್ಬರು, ಪುರಾಣ ಓದುವವರು ಒಬ್ಬರು ಇದ್ದರು. ಆ ಪುರಾಣ ಓದುವವರ ಕಂಠ ಸುಶ್ರಾವ್ಯವಾಗಿ ಅನೇಕ ರಾಗಗಳಲ್ಲಿ ಸಂಚಾರ ಮಾಡ್ತಾ ಇತ್ತು. ತುಂಬಾ ಸೊಗಸಾಗಿರ್ತಿತ್ತು. ಅದರಿಂದ ಏನಾಯ್ತು ಅಂದರೆ ನನಗೆ ದೇವಸ್ಥಾನದಲ್ಲಿ ಉತ್ಸವಕಾಲದಲ್ಲಿ ಹರಕೆ ಕಟ್ಟಿಕೊಂಡು ಬರ್ತಾ ಇದ್ದರು ಮುಖ್ಯವಾಗಿ ಓಲಗ ಮೇಳದವರು. ನನಗೆ ಓಲಗ ಅಂದರೆ ತುಂಬಾ ಇಷ್ಟ. ಅದು ಬಿಟ್ಟರೆ ವೀಣೆ. ಎರಡೇ ಇಷ್ಟವಾದದ್ದು. ವೀಣೆ ಯಾತಕ್ಕೆ ಇಷ್ಟ ಅಂತಾ ಹೇಳಿದ್ರೆ, ಆ ವೀಣೆ ಅನ್ನೋದನ್ನು ಸ್ತೋತ್ರಪುಷ್ಪವನ್ನಾಗಿ ಅರ್ಪಿಸುತ್ತಾರೆ. ಮಂತ್ರ ಪುಷ್ಟವನ್ನು ಅರ್ಪಿಸುತ್ತಾರೆ. ಅದರ ಕೊನೆಯಲ್ಲಿ ವೀಣೆ ನುಡಿಸ್ತಾ ಇದ್ದರು. ಆ ದೇವಸ್ಥಾನದ ಆವರಣದಲ್ಲಿ ಅವರು ಸಣ್ಣದಾಗಿ ನುಡಿಸಿದರೂ ಕೂಡ ಆ ಸುಶ್ರವ್ಯವಾದ ನಾದ ಕೇಳಿದ್ರೆ ಮನಸ್ಸಿಗೆ ತುಂಬಾ ಆಪ್ಯಾಯಮಾನವಾಗಿರ್ತಿತ್ತು. ಬೇರೆ ಒಂದು ಲೋಕವನ್ನೇ ಸೃಷ್ಟಿಸುವಂತಾಗುತ್ತಿತ್ತ.ಆದ್ದರಿಂದ ನನಗೆ ಏನೇ ಗೊತ್ತಿಲ್ಲ ಅಂದರೂ ಆ ಸ್ತೋತ್ರ ಪಾಠಗಳನ್ನು ರಾಗವಾಗಿ ಹೇಳ್ತಾ ಇದ್ರಲ್ಲ ಇದು ಮತ್ತು ಜಾತ್ರೆ, ಉತ್ಸವದ ಸಮಯದಲ್ಲಿ ಬರುತ್ತಿದ್ದಂತಹ ವಿದ್ವಾಂಸರು ಮತ್ತೆ ಪಲ್ಲವೋತ್ಸವದ ಸಮಯದಲ್ಲಿ ಬರುತ್ತಿದ್ದಂತಹ ವಿದ್ವಾಂಸರು ಮತ್ತೆ ಪಲ್ಲವೋತ್ಸವದ ಕಾಲದಲ್ಲಿ ಮೈಸೂರು ಕಡೆಯಿಂದ ವಾಸುದೇವಾಚಾರ್ಯರು, ಬಿಡಾರಂ ಕೃಷ್ಣಪ್ಪನವರು, ವೀಣೆ ಶೇಷಣ್ಣನವರು ಇವರೆಲ್ಲ ನಮ್ಮ ಮನೆಯ ಎದುರು ಮನೆಯಲ್ಲೇ ಬಿಡಾರ ಮಾಡ್ತಾ ಇದ್ರು. ವೀಣೆ ಶೇಷಣ್ಣನವರ ವೀಣೆಯ ಪರಿಚಯ ನಾನು ಒಂಬತ್ತು ವರ್ಷದ ಬಾಲಕನಾಗಿದ್ದಾಗಿನಿಂದ ಇದೆ. ಆ ಮೇಲೆ ಮೈಸೂರಿಗೆ ಬಂದ ಮೇಲೆ ಈ ಕೃಷ್ಣೋತ್ಸವಗಳು, ರಾಮೋತ್ಸವಗಳು ನವರಾತ್ರಿಗಳು ನಡೀತಿದ್ದವು. ಟೈಗರ್ ವರದಾಚಾರ್ ಅವರು ನಾನು ವಿದ್ಯಾರ್ಥಿಯಾಗಿದ್ದಾಗ ನಮ್ಮ ಮನೆ ಮಗ್ಗುಲಲ್ಲೇ ವಸತಿ ಮಾಡಿದ್ದರು. ಅಮೇಲೆ ವಾಸುದೇವಾಚಾರ್ಯರು ಈ ಗಣಪತಿ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಹೊಸ ಹೊಸ ರಚನೆಗಳು ಏನಿತ್ತು ಅದನ್ನು ಅವರು ಅಲ್ಲಿ ನಿರೂಪಿಸುತ್ತಿದ್ದರು. ನಾಲ್ಕು ವೇದಗಳ ಪಾರಾಯಣ ಆದ ಮೇಲೆ ಇವರ ಸಂಗೀತ ಸ್ವಲ್ಪ ನಡೀತಾ ಇತ್ತು. ಆ ಗಣಪತಿ ಪೂಜೆ,ವೇದಪಾರಾಯಣ, ಇವರ ಸಂಗೀತ ಕೇಳ್ತಾ ಇದ್ದರೆ, ಈ ಲೋಕವೇ ಬೇರೆ, ನಾವಿರುವ ಲೋಕವೇ ಬೇರೆ ಅನ್ನಿಸ್ತಿತ್ತು. ನಾನು ಬೆಂಗಳೂರಿಗೆ ಬಂದ ಮೇಲೆ ಅನೇಕ ದೊಡ್ಡ ಸಂಗೀತಗಾರರ ಸಂಗೀತವನ್ನು ಕೇಳ್ತಾ ಇದ್ದೆ. ಆ ಸಂಗೀತಗಳೆಲ್ಲ ಜ್ಞಾನ ರೂಪದಲ್ಲಿ ಇದ್ದವು. ಈವಾಗದು ಜ್ಞಾಪಕ ಇಲ್ಲ. ಅನುಭವ ನನಗೆ ಜ್ಞಾನರೂಪದಲ್ಲಿ ಇರುತ್ತೆ, ವಿವರಗಳು ಜ್ಞಾಪಕ ಇರೋದಿಲ್ಲ, ಆದರೆ ಸಂಗೀತಾಭ್ಯಾಸ ಮಾಡುವವರಿಗೆ ಜ್ಞಾನದ ಜೊತೆಗೆ ವಿವರಗಳು ಜ್ಞಾಪಕ ಬರುತ್ತದೆ.
ದೊರೆ: ಹಾಗಾದರೆ ನಿಮ್ಮ ಪ್ರಕಾರ ಈ ಕ್ರಮಬದ್ಧವಾಗಿ ಶಿಕ್ಷಣ ಆಗಿಲ್ದೇ ಇರೋದು ಒಂದು ವಿಧದಲ್ಲಿ ನಿಮಗೆ ಒಳ್ಳೇದಾಯ್ತು, ಹೊಸ ಹೊಸ ರಚನೆಗಳನ್ನು ಮಾಡೋದಕ್ಕೆ.
ಪುತಿನ: ಹೌದು ಸರಿ. ಆಮೇಲೆ ಇನ್ನೊಂದು ಸ್ವಾರಸ್ಯ ಹೇಳ್ತೀನಿ. ನಾನು ಸಂಗೀತಗಾರನಲ್ಲದೇ ಹೋದ್ರಿಂದ ಒಂದು ಪಕ್ಷ, ನಾನು ಏನೇ ಒಂದು ಅಪಸ್ವರ ಹಾಡಿ ಅಥವಾ ಇನ್ನೇನೋ ತಪ್ಪನ್ನ ಮಾಡಿದ್ರೆ ಅದನ್ನು ಯಾರು ಪ್ರಶ್ನಿಸೋದಿಲ್ಲ.
ದೊರೆ: ಹೌದು, ಸಂಗೀತ ವಿದ್ವಾಂಸ ತಪ್ಪು ಮಾಡಿದರೆ ಖಂಡಿತಾ ಪ್ರಶ್ನೆ ಮಾಡ್ತಾರೆ
ಪುತಿನ: ರಸಿಕತೆ ಬೇರೆ, ಸ್ವರಗೀತೆ ಬೇರೆ. ಶಾಸ್ತ್ರಕ್ಕೆ ಸರಿಯಾಗಿ ಇದೆಯೋ, ಭರತನ ನೂರೆಂಟು ಕರ್ಣಗಳು ಸರಿಯಾಗಿದೆಯೋ ಅದು ಬೇರೆ. ಇದು ಸರಿಯಾಗಿ ಇಲ್ಲ, ಸ್ವಾರಸ್ಯವಿಲ್ಲ ಅಂತ ಎಕ್ಸಾಮಿನರ್ಸ್ ನಂಬರ್ ಹಾಕ್ತಾರಲ್ಲ ಅದು ಬೇರೆ. ಒಟ್ಟಿನಲ್ಲಿ ನಾಟ್ಯ ಚೆನ್ನಾಗಿತ್ತೆ, ಸರಸವಾಗಿತ್ತೆ, ಹಾಗಿರುತ್ತೆ, ಹೀಗಿರುತ್ತೆ ಅಂತಾ ನೋಡೋ ನಮ್ಮಂಥ ರಸಿಕರು ಹೇಳ್ತಾರಲ್ಲ ಅದು ಬೇರೆ.  ಆದರೆ ನನಗೆ ಸಹಗೀತೆ ಬೇಕು. ಸಹಗೀತೆ ಪೂರ್ವರಚನೆಗಳಿಗಿಂತ ನವೀನವಾಗಿರುತ್ತೆ. ಇದು ಸಂಗೀತದ ಪ್ರಪಂಚಕ್ಕೆ ಒಂದು ಕಾಣಿಕೆಯಾಗುತ್ತೆ, ಹೊಸದಾಗುತ್ತೆ ಸಂಗೀತದ ವಿಕಾಸಕ್ಕೆ. ಸಂಗೀತ ಅನ್ನೋ ಅಂಥದ್ದು ಸ್ಟಾಟಿಕ್ ಅಲ್ಲ. ಅದು ತಲೆಮಾರಿನಿಂದ ತಲೆಮಾರಿಗೆ ಹೋಗ್ತಾ ಇರುತ್ತೆ. ಹೇಗೆ ಭಾವನೆಗಳು ಬದಲಾಗ್ತಾ ಹೋಗ್ತಾ ಇರುತ್ತೋ ಹಾಗೆ ಸಂಗೀತಾನೂ ಬದಲಾಯಿಸಿ ಬದಲಾಯಿಸಿ ಹೋಗ್ತಾ ಇರುತ್ತೆ.  ಪರಂಪರೆ ಈ ಬದಲಾವಣೆಗೆ ಎಡೆಕೊಡದೇ ಹೋದರೆ ಆ ಪರಂಪರೆ ನಷ್ಟ ಆಗಿಬಿಡುತ್ತೆ. ಪರಂಪರೆಯನ್ನು ಉಳಿಸಿಕೊಳ್ಳೋದಕ್ಕೆ ಈ ಬದಲಾವಣೆ ತಂದೇ ತೀರಬೇಕಾಗುತ್ತದೆ.
ದೊರೆ:ನೀವು ಸಂಗೀತದ ಅನುಭವದಿಂದ ಮೊದಲು ಸಂಗೀತ ಕವಿತೆಗಳನ್ನು ಬರೀತಾ ಇದ್ರಾ ಅಥವಾ ಪದ್ಯ ಬರೀತಾ ಇದ್ರ?ಪುತಿನ: ನಾನು ಮೊದಲು ಮಟ್ಟುಹಾಕಿ ಬರೀತಾ ಇರಲಿಲ್ಲ. ಹೀಗೆ ರಿಸೈಟೇಷನ್ ಪ್ರಕಾರವಾಗಿ ಬರೀತಾ ಇದ್ದೆ ಪದ್ಯಾನಾ. ನಾನು ಅದಕ್ಕೇ ‘ಅಹಲ್ಯೆ’ ಗೆ ಸಂಪೂರ್ಣವಾಗಿ ಸಂಗೀತ ಹಾಕಿಲ್ಲ. ಶಬರಿಗೆ ಹಾಕಿಲ್ಲ.
ದೊರೆ: ನಿಮ್ಮ ಮನಸ್ಸಿನಲ್ಲಿ ಸಂಗೀತ ಅನ್ನೋದು ಕಾಣ್ತಾ ಇರಲಿಲ್ಲ. ಶಬರಿಗೆ ಹಾಕಿಲ್ಲ. ಅದನ್ನು ಬೇರೆಯವರು ಯಾರಾದರೂ ಸಂಗೀತ ವಿದ್ವಾಂಸರು ಸಂಗೀತಕ್ಕೆ ಅಳವಡಿಸಿದರೆ ನೀವು ಒಪ್ಪಿಕೊಳ್ತೀರಾ?
ಪುತಿನ: ನೋಡಬೇಕು. ಅದನ್ನು ನಾನು ಕೇಳಿ ಹೇಳ್ಬೇಕು.  ಯಾಕೇಂದ್ರೆ ನಾನು ಅನೇಕ ರಚನೆಗಳಲ್ಲಿ ಕೆಲವನ್ನು ಒಪ್ಪಿಕೊಂಡಿದ್ದೇನೆ, ಕೆಲವನ್ನು ಒಪ್ಪಿಕೊಂಡಿಲ್ಲ.ದೊರೆ: ಹೌದು, ನೀವು ಅನೇಕ ಸಂಗೀತ ರೂಪಕಗಳಿಗೆ ನೀವೇ ಸಂಗೀತಾನೂ ಕೊಟ್ಟಿದ್ದೀರಿ.ಪುತಿನ: ಹೌದು ಕೊಟ್ಟಿದ್ದೇನೆ. ಯಾಕೆ ಕೊಟ್ಟಿದ್ದೀನಿ ಅಂದರೆ ನಾನು ಆ ಸಾಲುಗಳನ್ನು ರಚನೆ ಮಾಡಿದೆ.
ದೊರೆ: ರಚನೆ ಅಂದರೆ ಏನು ರಚನೆ? ಪಠ್ಯಾನೇ ಅಥವಾ ಸಂಗೀತಾನೆ?ಪುತಿನ: ರಚನೆ ಅಂದರೆ ಸಂಗೀತ. ಸಂಗೀತ ರಚನೆ, ಸಂಗೀತ ಈ ಸ್ವರದಲ್ಲಿ ಹೀಗೆ ಹೋಗಬೇಕು ಅಂತಾ.
ದೊರೆ: ಈ ಸಾಹಿತ್ಯ ಸಂಗೀತ ಒಟ್ಟಿಗೆ ಬಂತೇ?
ಪುತಿನ: ಇಲ್ಲ, ಇಲ್ಲ. ನನಗೆ ಇತ್ತೀಚೆಗೆ ಯಾವಾಗಲೂ ಸಂಗೀತ ಮೊದಲು ಬರುತ್ತೆ. ಈವಾಗ ಈ ಹಂಸ ದಮಯಂತಿ ಗೀತೆಗಳಿದ್ಯಲ್ಲ ಅದಕ್ಕೆಲ್ಲ ಮೊದಲು ಸಂಗೀತ ಆಮೇಲೆ ಅದರ ಸಾಹಿತ್ಯ. ಆ ಸಂಗೀತದ ಹೊಳಪು ನನಗೆ ಗೊತ್ತಾಗಿಬಿಡುತ್ತೆ. ಇದು ಹೊಸದಾಗಿರುತ್ತೆ. ಇದು ನಿಜವಾದ ಸಂಗೀತಗಾರರ ಕಿವಿಗೆ ಬಿದ್ದರೆ ಅವರು ಇದನ್ನು ಆಸಕ್ತಿಯಿಂದ ಸ್ವೀಕರಿಸಬಹುದು ಅನ್ನೋ ಭಾವ ನನಗೆ ಬರುತ್ತೆ. ಈ ವಸಂತ ಚಂದನದ ಸಂಗೀತ ಇದೆಯಲ್ಲಾ ಅದು ನವೀನ, ಅದು ಹ್ಯಾಗೆ ಬಂತು ಅಂತಾ ಹೇಳಿದ್ರೆ ಅದೊಂದು ಲಹರಿಯಲ್ಲಿ ಬಂತು.
ದೊರೆ: ವಸಂತ ಚಂದನ ನಾನು ಮೊದಲ ಸಲ ಕೇಳಿದಾಗ, ಅಲ್ಲಿಯತನಕ ತಾವೊಬ್ಬ ಸಂಗೀತ ರಸಿಕರು, ಆನಂದವಾಗಿ ಅನೇಕ ರಾಗಸಂಗೀತ ಕೇಳಿ ಆನಂದಪಡ್ತೀರ ಅಂತ ಇದ್ದೆ ನಾನು. ವಸಂತ ಚಂದನದ ಕೆಲವು ಮಟ್ಟುಗಳನ್ನು ನಾನು ಮೊದಲಬಾರಿ ಸುಮಾರು 35 ವರ್ಷಗಳ ಹಿಂದೆ ಕೇಳಿದಾಗ ಇದು ನೀವು ಮಾಡಿದ್ದು ಅಂತ ನನಗೆ ಗೊತ್ತಿರಲಿಲ್ಲ. ಯಾರೋ ಸಂಗೀತಗಾರರು ಅಳವಡಿಸಿದ್ದಾರೆ ಅಂತಾ ಇದ್ದೆ. ಆಮೇಲೆ ನೀವೇ ಮಾಡಿದ್ದು ಅಂತ ತಿಳಿದು ಬಹಳ ಆಶ್ಚರ್ಯ ಆಯ್ತು. ಅದರಲ್ಲಿ ಜಾನಪದ ದಾಟಿಯ ಅನೇಕ ಗೀತೆಗಳು ಇವೆ. ಆದರಲ್ಲಿ ಶಾಸ್ತ್ರೀಯ ಸಂಗೀತ ಅಷ್ಟಾಗಿ ಇಲ್ಲ. ಸುಗಮ ಸಂಗೀತ ಇದೆ. ಆದರೂ ಒಂದು ಗಾಂಭಿರ್ಯ ಇದೆ ಅದರಲ್ಲಿ. ಆಗಿನಿಂದ ನಿಮ್ಮ ಸಂಗೀತ, ಕವಿತಾ ರಚನೆ ಚಾತುರ್ಯದಲ್ಲಿ ನನಗೆ ಆಸಕ್ತಿ ಬಂತು.
ಪುತಿನ: ಅದಕ್ಕೆ ಏನು ಕಾರಣ ಅಂತಾ ಹೇಳಿದರೆ, ಮನಸ್ಸು ಹಗುರವಾಗಿರುತ್ತೆ. ಒಂದು ತರಹ ಲಹರಿಯಲ್ಲಿ ಇರ್ತೀವಿ.
ದೊರೆ: ಯಾವ ಲಹರಿ ಸಂಗೀತ ಲಹರೀನೋ?
ಪುತಿನ: ನಾನು ಬಸ್ಸಿನಲ್ಲಿ ಅನೇಕ ಸಂಗೀತ ರಚನೆಗಳನ್ನು ತೂರಿಬಿಟ್ಟಿದ್ದೇನೆ. ಫಸ್ಟ್ ಕ್ಲಾಸ್ ರಚನೆಗಳು.
ದೊರೆ: ಅಮೇಲೆ ಅದಕ್ಕೆ ಸಾಹಿತ್ಯ?
ಪುತಿನ: ಸಾಹಿತ್ಯ ನನಗೆ ಬಂದಿರೋದೇ ಆಮೇಲೆ. ನಾನು ಹೇಳಿದೆನಲ್ಲ ಶಂಕರಾಭರಣ ಒಂದು ವರ್ಷದಿಂದ ನನ್ನ ತಲೇಲಿ ಇದೆ. ಅದಕ್ಕೆ ಈಗ ಸಿಕ್ತು ಸಾಹಿತ್ಯ, ಸಂಗೀತದ ಕಾಂತಿಯನ್ನು ಕಡಿಮೆ ಮಾಡದ ರೀತಿ ನಾನು ಶಬ್ದಗಳನ್ನು ಪ್ರಯೋಗಿಸಬೇಕು. ಬರೀ ರಾಮ ಗೋವಿಂದ ಅಂದರೆ ಅಗೋದಿಲ್ಲ.ದೊರೆ: ನಿಮ್ಮ ರಚನೆಗಳ ಸಂಗೀತದ ಮರ್ಮ ಏನೂಂತ ಈವಾಗ ಗೊತ್ತಾಯ್ತು ನನಗೆ. ನೀವು ಮೊದಲು ಸಂಗೀತದ ಕಲ್ಪನೆ ಮಾಡಿಕೊಂಡು ಆಮೇಲೆ ಸಾಹಿತ್ಯ ಹೊಂದಿಸಿಕೊಳ್ತೀರಿ.
ಪುತಿನ: ಅದೂ ಸಂಗೀತ ಕಳೆಗುಂದದ ಹಾಗೆ. ನೀವು ಹೇಗೆ ವೀಣೆಯಲ್ಲಿ ಸಾಹಿತ್ಯವನ್ನು ಕಳೆದು ಸಂಗೀತವನ್ನು ಬಾರಿಸ್ತಿರೋ ಹಾಗೆ ನಾವು ಸಂಗೀತವನ್ನು ಕಳೆದು ಸಾಹಿತ್ಯವನ್ನು ಓದಿದರೂ ಕೂಡ ಈ ಭಾವ ಗಟ್ಟಿಯಾಗಿರುತ್ತೆ. ಸಾಹಿತ್ಯರಸಿಕರಿಗೆ ಅಲ್ಲಿ ಭಾವ ಚೆನ್ನಾಗಿದೆ ಅಂತಾ ಗೊತ್ತಾಗುತ್ತದೆ.
ದೊರೆ: ನಿಮ್ಮ ಸಂಗೀತವಲ್ಲದ ಕವಿತೆಗಳಿವೆಯಲ್ಲಾ ಅದರ ಪೊಯೆಟ್ರಿನೂ ಈ ಪೊಯೆಟ್ರಿನೂ ಒಂದೇ ಆಗಿದೆಯೋ ಅಥವಾ  ಏನಾದರೂ ವ್ಯತ್ಯಾಸ ಇದೆಯೇ?
ಪುತಿನ: ನೋಡಿ ‘ಹಂಸ ದಮಯಂತಿ’ ಅನ್ನೋ ಕೃತಿಗೆ ನನಗೆ ಯಾತಕ್ಕೆ ಬಹುಮಾನ ಕೊಟ್ಟಿದ್ದಾರೆ? ಸಾಹಿತ್ಯಕ್ಕೆ ಕೊಟ್ಟಿದ್ದಾರೆ.ಅದು ಗಟ್ಟಿ ಸಾಹಿತ್ಯ. ಆ ಗಟ್ಟಿ ಸಾಹಿತ್ಯದ ಮೇಲೆ ಒಂದು ವ್ಯಾಖ್ಯೆ ಕೊಡಬಲ್ಲೆ, ಸಂಗೀತಾನ ಬಿಟ್ಟುಬಿಡಿ. ಸಂಗೀತ ಕಳೆದುಬಿಡಿ.ಎರಡು ಸ್ವಾರಸ್ಯ ಇದೆ. ಒಂದು ಸಾಹಿತ್ಯದಲ್ಲಿ ನುರಿತು ಬುದ್ಧಿಯನ್ನು ಉಪಯೋಗಿಸಿ ಉತ್ತು ಉತ್ತು ಅದರಲ್ಲಿ ರಸವನ್ನು ಗ್ರಹಿಸಬೇಕು. ಅದು ಸ್ವಲ್ಪ ಗಟ್ಟಿಯಾಗಬೇಕು. ಅರ್ಥಬೇಕು, ಅದಕ್ಕೆ ಶಬ್ಧ, ಶಬ್ಧದಿಂದ ಅರ್ಥಕ್ಕೆ ಹೋಗಿ, ಅರ್ಥದಿಂದ ನೀವು ಭಾವವನ್ನು ಹಿಡಿದುಕೊಂಡು ಅದರಿಂದ ನೀವು ಆತ್ಮಕ್ಕೆ ಬೇಕಾದ ಸುಖವನ್ನು ಪಡೆಯಬೇಕು, ಹೀಗಿದೆ. ಸಂಗೀತ ಹಾಗಲ್ಲ. ಸ್ವರದ ಚಾತುರ್ಯ ಅದು ಕಿವಿಗೆ ಬಿದ್ದ ತಕ್ಷಣ ಮನಸ್ಸಿಗೆ ಆನಂದ ಆಗಿಬಿಡುತ್ತೆ. ಚೆನ್ನಾಗಿದೆ ಚೆನ್ನಾಗಿಲ್ಲ ಎರಡೇ ಅದಕ್ಕೆ ಇರೋದು.
ದೊರೆ: ಆದ್ರೂನೀವು ಈವಾಗ ಹಳೆಯಸಂಪ್ರದಾಯಿಕವಾದ ಪ್ರಾಚೀನವಾದ ರಾಗ ಶಂಕರಾಭರಣದಲ್ಲಿ(ರಚನೆಮಾಡಿದಾಗ)ಇದರಲ್ಲಿ ಕೂಡ ಶಂಕರಾಭರಣದ ಛಾಯೆಅದರ ವ್ಯಕ್ತಿತ್ವ ಇಲ್ಲದೇ ಹೋದರೆ ಅದರಲ್ಲೂ ನಾವು ಆಕ್ಷೇಪಣೆ ತೆಗೀಬೇಕಾಗುತ್ತೆ.
ಪುತಿನ: ಅದಕ್ಕೇನೆ ನಾವು ಸಹೃದಯರ ಹತ್ತಿರ ಒಪ್ಪಿಸೋದುನನ್ನ ಕವಿತೆಗಳನ್ನು ಶ್ರೀಕಂಠಯ್ಯನವರುಶಿವರಾಮಶಾಸ್ತ್ರಿಗಳ ಹತ್ತಿರ ಯಾಕೆ ಒಪ್ಪಿಸುತ್ತಿದ್ದೆ ನಾನುನಾನು ಮೊದಲು ಕಾಗದ ಬರೀತಾ ಇದ್ದೆ ಶ್ರೀಕಂಠಯ್ಯನವರಿಗೆ.  ಕಾಗದದಲ್ಲಿ ಒಂದು ಪದ್ಯಬರೆದು ಕಳಿಸ್ತಾ ಇದ್ದೆಶಿವರಾಮ ಶಾಸ್ತ್ರಿಗಳುಶ್ರೀಕಂಠಯ್ಯನವರು ಏನು ಮಾಡಿದರು ಅಂದ್ರೆ ಅವನ್ನೆಲ್ಲಾ ಶೇಖರಣೆ ಮಾಡಿ, ಕಾಪಿಮಾಡಿಅಚ್ಚಿಗೆ ಕೊಟ್ಟುಪಬ್ಲಿಷ್ ಮಾಡಿಭೇಷ್ ಅಂದ್ರು.  ಅವರು ಇಲ್ದೇ ಹೋದ್ರೆ ಮೂಲೆ ಸೇರಿಬಿಡ್ತಾ ಇತ್ತುನಾನು  ಸಂಗೀತದಲ್ಲಿ ಯಾಕೆ ಬರೀತೀನಿ ಅಂದರೆ ಒರಿಜಿನಲ್ ಆಗಿದ್ರೆ ಸಂಗೀತಕ್ಕೆ ಸೇರಿಸಬಹುದು ಇದನ್ನಕರ್ನಾಟಕ ಸಂಗೀತದಲ್ಲಿ ಶಂಕರಾಭರಣದಲ್ಲಿ ಅನೇಕ ವಿಧವಾದ ಕೀರ್ತನೆಗಳು ಇವೆಇದೂ ಹಾಗೇ ಇದ್ದರೆ ಇದನ್ಯಾಕೆ ನಾವು ಮಾಡಬೇಕುಅದನ್ನೇ  ಕೇಳಿ ಸಂತೋಷಪಡಬಹುದಲ್ಲಹಾಗೇ ಒಂದು ರಾಗದಲ್ಲಿ ಎಷ್ಟು ಒರಿಜಿನಲ್ ಮೈಂಡ್ಎಷ್ಟು ವಿಧವಾದ ಮುಖಗಳನ್ನುಎಷ್ಟು ವಿಧವಾದ ಕೀರ್ತನೆಗಳನ್ನುಲಯಭಾಗಗಳನ್ನು ತರುತ್ತೀವೊ ಶಂಕರಾಭರಣದ ವೈಭವ ಅಷ್ಟು ಹೆಚ್ಚುತ್ತೆಆದ್ದರಿಂದ  ಸಂಗೀತಗಾರರು ಏನ್ಮಾಡಬೇಕು ಅಂದರೆ ಆಸ್ತಿಕರಿಂದ ಬರಲಿಪಾಮರರಿಂದ ಬರಲಿವಿಷದಿಂದಲೂ ಸಹ ಅಮೃತವನ್ನು  ಸಂಗ್ರಹಿಸಬೇಕುನೀವು ಇವನು ಪಾಮರಸಂಗೀತ ಗೊತ್ತಿಲ್ಲ ಅಂತ ಬಿಟ್ಟುಬಿಟ್ಟರೆ ಏನಾಗುತ್ತೆ ಅಂದರೆ ನಿಮ್ಮ  ಶಂಕರಾಭರಣದ ಒಂದು  ಮುಖ ಹೋಗಿಬಿಡುತ್ತದೆಆದ್ದರಿಂದ ಇವನ್ನ ಗಮನಿಸಬೇಕು ನೀವು.
ದೊರೆ: ಹೌದುಇಂಥ ಅನೇಕ ನಿಮ್ಮ ರಚನೆಗಳುಅದರ ಸಂಗೀತಸಾಹಿತ್ಯ ಮೌಲ್ಯ ಬಹಳ ಚೆನ್ನಾಗಿದೆಯಾಕೆ ಅಂತಾ  ಹೇಳತೀನಿಅದನ್ನ ವಾದ್ಯದಲ್ಲಿ ನುಡಿಸಿದ್ರೂ ಅದರ ಸಾಹಿತ್ಯ ಇಲ್ಲದೇ ಕೇಳಬಹುದುಕೆಲವನ್ನು ನಾನು ನುಡಿಸ್ತಾ ಇದ್ದೀನಿ. ಚೆನ್ನಾಗಿದೆಅದರ ಸಂಗೀತಮೌಲ್ಯ ಚೆನ್ನಾಗಿದೆ ಅಂತ ಆಯ್ತುಅದಕ್ಕೆ ಸಾಹಿತ್ಯದ ಸಹಾಯಾನೇ ಇಲ್ಲದೇ ಅದು ನಿಲ್ಲುತ್ತೆ. ಹಾಗೇ ಅದೇ ಹಾಡುಗಳು ಸಾಹಿತ್ಯದಲ್ಲಿ ಕಾವ್ಯವಾಗಿ ನಿಲ್ಲಬಲ್ಲವು.
ಪುತಿನ: ಅದೇ ಹೇಳ್ತಾ ಇದ್ದೀನಲ್ಲಅದಕ್ಕೇ ಪ್ರೈಜ್ ಕೊಟ್ಟಿರೋದು ಅಂತಾನೀವು ಯಾವ ಹಾಡಾದ್ರೂ ಸರಿದೀಪಲಕ್ಷ್ಮಿ ಅನ್ನೋದು ನಮ್ಮ ಹಂಸ ದಮಯಂತಿಯಲ್ಲಿ ಒಂದು ಪೋರ್ಷನ್.
ದೊರೆ: ಅದೇ ನಿಮ್ಮ ವಿಶೇಷ.
ಪುತಿನ: ಹಾಂನಾನು ಹೇಳಿದೆನಲ್ಲಬದಲಾವಣೆ ಅಗತ್ಯ ಕರ್ನಾಟಕ ಸಂಗೀತಕ್ಕೆ ಒಂದು  ವೈಶಿಷ್ಟ್ಯ ಇದೆ ಅಂತನೀವು ಯಾವುದನ್ನು ಭಾವಿಸಿಕೊಂಡು ಒಂದು ವೈಶಿಷ್ಟ್ಯ ಅಂತಾ ಹೇಳ್ತೀರೋ ಅದೇ  ಸಂಪ್ರದಾಯ.   ವೈಶಿಷ್ಟ್ಯವನ್ನು ನೀವೂ ಉರ್ಜಿತಗೊಳಿಸಿಕೊಂಡು ಬರಬೇಕಾದರೆ ಬದಲಾವಣೆಯಿಂದ ಮಾತ್ರ ಆಗುತ್ತೆ.
ದೊರೆ: ಹಾಗೇನೆ ಆಗ್ತಾ ಇರೋದುಹಾಗೇ ಬೆಳೀತಿರೋದು ಕಲೆ.
ಪುತಿನ: ಈಗ ನಿಮ್ಮ ಶೈಲಿವೀಣೆ ಶೇಷಣ್ಣ ಅವರ ಶೈಲಿ ಮತ್ತು ವೆಂಕಟಗಿರಿಯಪ್ಪ ಅವರ ಶೈಲಿನೂ ಕೇಳಿದ್ದೀನಿ ಮೂರಕ್ಕೂವ್ಯತ್ಯಾಸವಿದೆವ್ಯತ್ಯಾಸವಿದೆಯೋ ಇಲ್ವೋಬದಲಾವಣೆ ಇದೆಯಲ್ವೋ?  ಆದರೆ  ಸಂಪ್ರದಾಯ ಇದೆಅಂದರೆ  ಬದಲಾವಣೆಯಿಂದ ನೀವು ಸಂಪ್ರದಾಯವನ್ನು ಪೋಷಿಸಿಕೊಂಡು ಬಂದಿದ್ದೀರಿ.
ದೊರೆ: ನೀವು ಸಂಗೀತದಲ್ಲೂ ಇದೇ ನಿಯಮಾನ ಅನುಸರಿಸಿದ್ದೀರಿಕೆಲವು ಕೀರ್ತನೆಗಳೂ ಇವೆ.
ಪುತಿನ: ಮಡಿಯಿಲ್ಲದೆಆದರೆ ನಾಜೂಕಾದ ನವರಾಗದ ರಚನೆಗಳೂ ಇವೆಫಾರ್ ಎಕ್ಸಾಂಪಲ್ವಾಸಂತಿ ಮಾಧವಿಯಲ್ಲಿನಾನು ವಸಂತ ಕಾಲದ ವೈಭವವನ್ನು ವರ್ಣನೆ ಮಾಡಿದೆಬಹಳ ಖುಷಿಯಾಗಿತ್ತು.
ದೊರೆ:  ರಾಗ ಬಹಳ ಮಡಿಯಾಗಿಸಂಪ್ರದಾಯವಾಗಿ ಬಂದ ರಾಗ ಅಲ್ಲಇದಕ್ಕೆ ಏನು ಹೆಸರಿಟ್ಟಿದ್ದೀರಿ?
ಪುತಿನ: ವಾಸಂತಿ ಅಂತ.
ದೊರೆ: ಸಂಪ್ರದಾಯವಾದ ಸಂಗೀತದಲ್ಲಿ  ರಾಗವನ್ನು ಇಲ್ಲಿಯತನಕ ನಾನು ಕೇಳಿಲ್ಲ ಹೊಸ ಕಲ್ಪನೆಸಂಗೀತ ಕಲ್ಪನೆ ನಿಮಗೆ ಹ್ಯಾಗೆ ಬಂತು?
ಪುತಿನ: ಅದೇ ‘ಯದ್ ಭಾವಂ ತದ್ ಭವತೀ
ದೊರೆ:  ಸಂದರ್ಭಕ್ಕೆ ತಕ್ಕಂತೆ  ಗೇಯನಾಟಕದಲ್ಲಿ ಇದು ತಾನಾಗೇ ಒದಗಿ ಬಂತೇ ಅಂತಾ.
ಪುತಿನ: ಹೌದುಯಾಕೇಂದ್ರೆ ರಾಮೋದಯ ಅನ್ನೋ ನಾಟಕ ಬರೀಬೇಕಾದ್ರೆ ಅದರಲ್ಲಿ ತನ್ಮಯನಾಗಿ ಒಂದು ತಿಂಗಳು  ಇರ್ತೀನಿಬೇರೆ ಏನೂ ಇಲ್ಲಊಟ ಮಾಡ್ತೀನಿಆಫೀಸಿಗೆ ಹೋಗ್ತೀನಿಕೆಲಸ ಮಾಡ್ತಾ ಇರ್ತೀನಿಬೇರೆ ಏನೂ ಇರೋದಿಲ್ಲ  ಅಲ್ಲಿ ಚಿಂತನೆಯೇ ಇರುತ್ತೆಇದು ಮುಖ್ಯ ನನಗೆ ಅಲ್ಲಿ ತನ್ಮಯತೆ ಇರದೇ ಹೋದರೆ ನಮಗೆ ಸಂಗೀತ ಸಿಕ್ಕೊಲ್ಲ. ಭಾವ ಸಿಕ್ಕೊಲ್ಲ.
ದೊರೆ: ನೀವು ಈಗ ಶಬರಿಅಹಲ್ಯೆಇವುಗಳಿಗೆ ಮೊದಲು ನಾನು ಸಂಗೀತದ ಕಲ್ಪನೆ ಮಾಡಲಿಲ್ಲ ಅಂದಿರಿಅದನ್ನ ಮೊದಲು ಬರೆದಿರಾ ಅಥವಾ ಗೋಕುಲ ನಿರ್ಗಮನಹರಿಣಾಭಿಸರಣ ಇದನ್ನೆಲ್ಲ ಮೊದಲು ಬರೆದ್ರಾ?
ಪುತಿನ: ಮೊದಲು ಅಹಲ್ಯೆ.
ದೊರೆ: ಆವಾಗ ಸಂಗೀತ ನಿಮ್ಮ ಮನಸ್ಸಿನಲ್ಲಿ ಅದಕ್ಕೆ ಮೂಡ್ತಾ ಇತ್ತಾ?
ಪುತಿನ: ಸುಮಾರುಅಂದ್ರೆ ಹಿಡಿತ ಇಲ್ಲಏನೋ ಸಂಗೀತ ಹಾಕಿದ್ರೆ ಚೆನ್ನಾಗಿರುತ್ತೆ ಅಂತಾಖಚಿತ ಸ್ವರ ಇರಲಿಲ್ಲಗೋಕುಲ ನಿರ್ಗಮನ ಮಾತ್ರ ಹಾಡಿಕೊಂಡು ಬರೆದೆಅದರಲ್ಲಿ ಸ್ವಲ್ಪ ಶಾಸ್ತ್ರೀಯ ಸಂಗೀತದ ಒಲವೇ ಕಂಡುಬರುತ್ತೆ.
ದೊರೆನಾಟಕುರಂಜಿಖರಹರಪ್ರಿಯರಂಜನಿ ಮೊದಲಾದ ರಾಗಗಳು ಇವೆನಂತರದಲ್ಲಿ ನೀವು ಬರೆದ ನೃತ್ಯರೂಪಕಗಳಲ್ಲಿ ನವೀನವಾದ ರಾಗಗಳು ಬಂದಿವೆ.
ಪುತಿನ: ಯಾಕೇಂತ ಹೇಳಿದ್ರೆ ಗೋಕುಲ ನಿರ್ಗಮನ ಒಂದು ಪೌರಾಣಿಕವಾದ ಕಥೆಅದಕ್ಕೆ ಜಾಸ್ತಿ ಮ್ಯೂಸಿಕ್ ಹಾಕಬೇಕು  ಅಂತ ನನಗೆ ತೋರಲಿಲ್ಲ ವಸಂತ ಚಂದನ ಅನ್ನೋದು ಋತುವೈಭವಅದೊಂದು ಸೆಕ್ಯುಲಾರ್ ಪೊಯೆಂನಮ್ಮಲ್ಲಿ  ಸೆಕ್ಯುಲಾರ್ ಮ್ಯೂಸಿಕ್ ಇಲ್ಲವಲ್ಲನಮ್ಮಲ್ಲಿ ಪ್ರತಿಯೊಂದಕ್ಕೂ ತ್ಯಾಗರಾಜರುಫ್ಯೂನರಲ್ಲಿಗೂ ತ್ಯಾಗರಾಜರುಮದುವೆಗೂ  ತ್ಯಾಗರಾಜರುಎಲ್ಲದಕ್ಕೂ ತ್ಯಾಗರಾಜರೇ.ದೊರೆ: ಮ್ಯೂಸಿಕ್ ಅನ್ನೋದೇ ಒಂದು ಸ್ವತಂತ್ರವಾದ ಕಲೆಸೆಕ್ಯುಲಾರ್  ಮ್ಯೂಸಿಕ್ ಯಾಕೆ ಬೇಕು ಅಂತೀನಿ.
ಪುತಿನ: ಫ್ಯೂನರಲ್ಲಿಗೆ ಏನು ಮಾಡ್ತೀರಾ?
ದೊರೆ: ಫ್ಯೂನರಲ್ಲಿಗೆ ಸಂಗೀತಾನೆ ಬೇಡ ಅಂತೀನಿ ನಾನು.
ಪುತಿನ: ಸಂಗೀತ ಬೇಕಾಗುತ್ತೆಫ್ಯೂನರಲ್ಲಿಗೆ ಬ್ಯಾಂಡ್ಸ್ಲೋ ಮೋಷನ್ ಬ್ಯಾಂಡ್ ಬೇಕಾಗುತ್ತೆಹೀಗೇ ಪ್ರತಿಯೊಂದಕ್ಕೆ, it expresses any feeling you want to. Music is the best method to express feelings.
ದೊರೆ: ನಾಟಕದ ಸಂಗೀತಅದರಿಂದ ನಿಮಗೇನಾದರೂ ಸ್ಪೂರ್ತಿ ಬಂದಿದೆಯೇ?
ಪುತಿನ:  ಒಳ್ಳೇ ಸಂಗೀತವನ್ನು ಕೇಳಿ ಸಂಗೀತವನ್ನು ನಾಟಕದಲ್ಲಿ  ಪಾತ್ರ ಸಂದರ್ಭದಲ್ಲಿ ಹಾಡಿಬಿಟ್ಟರೆ ಅಷ್ಟು  ಚೆನ್ನಾಗಿರುತ್ತೆ ಅಂತ ಅನ್ನಿಸಿದೆ ನನಗೆನಮ್ಮ ಭೈರವಿಯಲ್ಲಿ ವೀಣೆ ಶೇಷಣ್ಣವರು ಬಾರಿಸಿದರೆ ಹೇಗೆ ಇಂತಹ ಸಂದರ್ಭದಲ್ಲಿ?  ರಾಗವನ್ನು  ಸ್ತರದಲ್ಲಿ ಸಂದರ್ಭದಲ್ಲಿಹೇಳಿಬಿಟ್ಟರೆ ದೃಶ್ಯ ಎಷ್ಟು ಮನೋಹರವಾಗಿರುತ್ತೆಎಷ್ಟು ಚೆನ್ನಾಗಿರುತ್ತೆ ಪರಿಸರರಹಿತವಾದ ಸಂಗೀತ ಇದೆಯಲ್ಲಾಅದು ಪರಿಸರದಲ್ಲಿ ಎಷ್ಟೊ ಸೊಗಸುತ್ತೆ ಅನ್ನೋದನ್ನು ನಾನು ಅನೇಕ ಸಲ  ಯೋಚಿಸಿದ್ದೇನೆನಾನು ಹೇಳಿದೆನಲ್ಲ ಸಂಗೀತಜ್ಞಾನ ಹೀಗೆ ಸ್ವರಗಳಾಗಿ ಹೊರಳುತ್ತಲ್ಲಜ್ಞಾನ ವಿವರಗಳಲ್ಲಿ.
ದೊರೆ: ಭಾವ ಜ್ಞಾನ
ಪುತಿನ: ಹಾಂ ಭಾವಜ್ಞಾನ ಭಾವಕ್ಕೆ ಅತ್ಯುತ್ತಮವಾದ ಸಂಗೀತ ಕೇಳುವ ಜ್ಞಾನ ಇದೆ ಜ್ಞಾನದಿಂದ ಸಾಹಿತ್ಯ ಹೊರಡುತ್ತೆ.ಹೇಗೆ ಹೊರಡುತ್ತೆನವೀನವಾಗೇ ಹೊರಡುತ್ತೆ!
ದೊರೆ: ನಮಗೆ ಫಲಿತಾಂಶ ಮುಖ್ಯಶಾಶ್ವತವಾಗಿ ನಿಲ್ಲುವಂತಹ ಅನೇಕ ಒಳ್ಳೆಯ ರಚನೆಗಳು ನಿಜವಾಗಲೂ ಬಂದಿದೆಬಹಳ ಸಂತೋಷ ನರಸಿಂಹಾಚಾರ್ರೇ.
ಪುತಿನ: ವಂದನೆಗಳು
*************

ಪುತಿನ ಅವರ ಮೇರುಕೃತಿ ಶ್ರೀಹರಿಚರಿತೆಯನ್ನು ಕುರಿತು ಎಚ್‌ಎಸ್‌ವಿಯವರ ಮಾತುಗಳು
 ಕವಿವರ್ಯರಾದ ಡಾಪುತಿನ ಅವರ 'ಶ್ರೀಹರಿಚರಿತೆಶ್ರೀಕೃಷ್ಣನ ಸನ್ನಿಧಿಯನ್ನು ಸಾರ್ವಕಾಲಿಕವೂಸಾರ್ವತ್ರಿಕವೂ ಆದ  ನೆಲೆಯಲ್ಲಿ ಕಲ್ಪಿಸುವುದರಿಂದ  ಕಾವ್ಯದ ಅಧ್ಯಯನವು ಕಾವ್ಯಾಸಕ್ತರಿಗೆ ದಿವ್ಯಾನಂದದ ಅನುಸಂಧಾನವಾಗಿ ಪರಿಣಮಿಸುತ್ತದೆಈವರೆಗೆ ಬಂದ ಕೃಷ್ಣ ಕಾವ್ಯಗಳಂತೆ ಇದು ಭಕ್ತಿಪರವಾದ ಕಾವ್ಯವಲ್ಲಆನಂದಾನುಭೂತಿಯ ಕಾವ್ಯಶ್ರೀಕೃಷ್ಣ ಸಾನ್ನಿಧ್ಯವು  ಪುತಿನಭಾವಿಸುವಂತೆ ನಿರ್ಬಾಧವಾದ ಬಾಳುವೆಯ ಸರ್ವವ್ಯಾಪಿಯಾದ ಒಂದು ಮಂಗಳ ಸ್ಥಿತಿಇಂಥ ಮಂಗಳ ಸ್ಥಿತಿಯ  ಸ್ಥಾಪನೆಯುವ್ಯಷ್ಟಿ ಸಮಷ್ಟಿಗಳ ಅನ್ಯೋನ್ಯ ಸಂಬಂಧಗಳಿಂದ ಮಾತ್ರ ಸಾಧಿತವಾಗತಕ್ಕದ್ದುಇಲ್ಲಿ ಚಿತ್ರಿತವಾಗಿರುವ ಕಾಳಿಂಗಮರ್ದನಗೋವರ್ಧನೋದ್ಧರಣಶಕ್ರದಮನಗೋವಿಂದ ಪಟ್ಟಾಭಿಷೇಕನವಗೋಕುಲ ನಿರ್ಮಾಣವೇಣುವಿಸರ್ಜನ  ಮುಂತಾದ ಕಥಾಪ್ರಸಂಗಗಳು ವ್ಯಷ್ಟಿ ಸಮಷ್ಟಿಗಳ ಅನ್ಯೋನ್ಯ ಸಂಬಂಧದ ತಳಪಾಯದ ಮೇಲೆ ನಿರ್ಮಿಸಿದ ಕಲಾತ್ಮಕ  ಸಿದ್ಧಿಗಳಾಗುವ ಮೂಲಕ ಶ್ರೀಹರಿಚರಿತೆಗೆ ಚಿಂತನೆ ಮತ್ತು ವಿಚಾರಪರತೆಯ ಗಟ್ಟಿ ಸ್ನಾಯುಗಳನ್ನು ಕಲ್ಪಿಸಿವೆ.
ಸರಳ ಸಜ್ಜನಿಕೆಯ ಹಿರಿಯ ಚೇತನ ಕವಿಪುಂಗವ ಪು.ತಿ.ನ.ರವರಿಗೆ ಸಂದ ಪ್ರಶಸ್ತಿಗಳು ಹಲವಾರು.

1966ರಲ್ಲಿ ಹಂಸ ದಮಯಂತಿ ಮತ್ತು ಇತರ ರೂಪಕಗಳು” ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1981ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
ಕ.ಸಾ.ಪ. ಗೌರವ ಸದಸ್ಯತ್ವ,
ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ,
ಮೈಸೂರು ವಿ.ವಿ. ಡಾಕ್ಟರೇಟ್,
1991ರಲ್ಲಿ ಭಾರತ ಸರಕಾರದ ಪದ್ಮಶ್ರೀ,
ರಾಜ್ಯೋತ್ಸವ ಪ್ರಶಸ್ತಿ,
ನಾಡೋಜ ಪ್ರಶಸ್ತಿ, 
ಪಂಪ ಪ್ರಶಸ್ತಿ 
ಮುಂತಾದ ಹಲವಾರು ಪ್ರಶಸ್ತಿ ಗೌರವಗಳನ್ನು ಪಡೆದಿರುವ ಶ್ರೀಯುತರು ಒಳ್ಳೆಯ ಹಿರಿಯ ಸ್ನೇಹಿತರನ್ನೂಅಭಿಮಾನಿ ಕಿರಿಯ ಸ್ನೇಹಿತರನ್ನೂ ಹಾಗೂ ಸಹೃದಯಿಗಳ ಮೆಚ್ಚಿಗೆಯನ್ನೂ ಪಡೆದವರಾಗಿದ್ದಾರೆ.
'ನಾನು ಬದುಕಿರುವಾಗಲೇ ಬಾಳಿ, ಬದುಕಿದ ನನ್ನ ಮನೆ ಸ್ಮಾರಕವಾಗಬೇಕು. ನಾನು ಬರೆದ ಸಾಹಿತ್ಯ ನಿಂತ ನೀರಾಗದೆ, ನನ್ನ ಸಾವಿನಾಚೆಯೂ ಮುಂದಿನ ಪೀಳಿಗೆಯನ್ನು ತಲುಪುವಂತಾಗಬೇಕು' ಎನ್ನುವುದು ಪುತಿನ ಅವರ ಆಶಯವಾಗಿತ್ತು. ಅದಕ್ಕೆ ಅನುಗುಣವಾಗಿ ನವಂಬರ್‌ 16, 1995 ರಲ್ಲಿ ಈ ಪ್ರತಿಷ್ಠಾನವು ನೋಂದಾಯಿಸಲ್ಪಟ್ಟು ಅಸ್ತಿತ್ವಕ್ಕೆ ಬಂತು. ಬಗೆಬಗೆಯ ಯೋಜನೆಗಳು ಪ್ರತಿಷ್ಠಾನದ ಬಾನಂಗಳದಲ್ಲಿ ಗರಿಗೆದರಿತು. 1996ರಲ್ಲಿ ಅವರ ಮನೆ ಸ್ಮಾರಕವಾಗಿ, ಸರ್ಕಾರದ ತೆಕ್ಕೆ ಸೇರಿತು. ಪುತಿನ ಅವರು 1998ರಲ್ಲಿ ತಮ್ಮ ತೊಂಬತ್ಮೂರನೆಯ ವಯಸ್ಸಿನಲ್ಲಿ ವಿಧಿವಶರಾದರು. 
ನಂತರ, ಟ್ರಸ್ಟ್‌ನವರು ಕವಿಯ ಬಯಕೆಯಂತೆ ಮನೆಯ ಮೂಲ ರೂಪವನ್ನು ಬದಲಿಸದೆ 2000ನೇ ಇಸ್ವಿಯಲ್ಲಿ ಪ್ರಾಚ್ಯವಸ್ತು ಇಲಾಖೆಗೆ 10 ಲಕ್ಷ ರೂಪಾಯಿಗಳಿಗೆ ಗುತ್ತಿಗೆ ನೀಡಿ ಹೊಸ ರೂಪ ಕೊಡಲು ಮುಂದಾದರುಶತಮಾನದ ಅಂಚಿನಲ್ಲಿದ್ದ ಮನೆಯ ಹಳೇ ಕಂಬಗಳು, ಮಹಡಿಯ ಮೆಟ್ಟಿಲುಗಳು, ಹೆಂಚುಗಳನ್ನು ಬಳಸಿಕೊಂಡೇ ಮೂಲ ಮನೆಯ ಅಂದ, ಚಂದಕ್ಕೆ ಯಾವುದೇ ಧಕ್ಕೆ ಬಾರದಂತೆ ಕವಿ ಮನೆ ಇಂದು ಸುಂದರ ಸ್ಮಾರಕವಾಗಿದೆ. ಈ ಮನೆಯಲ್ಲಿ ಕವಿ ಪುತಿನ ಅವರ ಊರು ಗೋಲು, ಬರೆಯಲು ಬಳಸುತ್ತಿದ್ದ ಮಣೆ, ಟೋಪಿ ಸೇರಿದಂತೆ ಮಹಡಿಯಲ್ಲಿ ಕುಳಿತು ಬರೆಯುತ್ತಿದ್ದ ಜಾಗವನ್ನೂ ಸಂರಕ್ಷಿಸಲಾಗಿದೆ. ಪುತಿನ ಅವರು ಬಳಸುತ್ತಿದ್ದ ಮೇಜು, ಕುರ್ಚಿ, ದೇವರ ಮನೆ ಎಲ್ಲವನ್ನೂ ಯಥಾಸ್ಥಿತಿಯಲ್ಲಿಯೇ ಉಳಿಸಿಕೊಳ್ಳಲಾಗಿದೆ. ಪುತಿನ ಅವರ ಗ್ರಂಥಗಳನ್ನು ಇಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಖ್ಯಾತ ಗಾಯಕರು ಹಾಡಿರುವ ಪುತಿನ ಅವರ ಧ್ವನಿಸುರುಳಿಗಳನ್ನೂ ಇಲ್ಲಿ ಪ್ರದರ್ಶಿಸಲಾಗಿದೆ. ಪು.ತಿ.ನ. ಅವರಿಗೆ ಸಂದ ಗೌರವ, ಪ್ರಶಸ್ತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.ಅವರ ಎಲ್ಲ ಕೃತಿಗಳನ್ನೂ ಪ್ರಕಟಿಸುವ ಯೋಜನೆ ಇದೆ. ಈಗಾಗಲೇ ಅವರ ಗೇಯ ರೂಪಕಗಳನ್ನು ಪ್ರಕಟಿಸಲಾಗಿದೆ. ಪುತಿನ ಟ್ರಸ್ಟ್‌ ವತಿಯಿಂದ ಪುತಿನ ಅವರ ಹೆಸರಿನಲ್ಲಿ ಪ್ರತಿವರ್ಷ ಉತ್ತಮ ಕಾವ್ಯ ಹಾಗೂ ನಾಟಕಕ್ಕೆ 10 ಸಾವಿರ ರುಪಾಯಿ ಪುರಸ್ಕಾರವನ್ನೂ

ನೀಡಲಾಗುತ್ತಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪರೀಕ್ಷೆಯ ಕಾವ್ಯ ಮೀಮಾಂಸೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವವರಿಗೆ ಚಿನ್ನದ ಪದಕವನ್ನೂ ನೀಡಲಾಗುತ್ತಿದೆ. ಅಲ್ಲದೆ, ಕವಿಯ 'ಮನೆ ದೇಗುಲ', 'ರಥ ಸಪ್ತಮಿ', 'ಹರಿಚರಿತೆ', 'ಮಾಂದಳಿರು', 'ಜಾನ್ಹವಿಗೆ ಜೋಡಿ ದೀವಿಗೆ', 'ಗೋಕುಲ ನಿರ್ಗಮನ' ಸೇರಿದಂತೆ ಅನೇಕ ಕೃತಿಗಳ ಪ್ರಥಮ ಮುದ್ರಣದ ಕೃತಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಪುತಿನ ಅವರ ಸಾಹಿತ್ಯಿಕ- ಸಾಂಸ್ಕೃತಿಕ ಮಾಹಿತಿ ಹಾಗೂ ಸಾಮಗ್ರಿಗಳನ್ನೊಳಗೊಂಡ ಈ ವಸ್ತು ಪ್ರದರ್ಶನಾಲಯ ರೂಪದಮನೆ ಈಗ ಪುತಿನ ಅವರ ಹೆಸರಿನ ಪುರಸ್ಕಾರವನ್ನು ಆಯಾಯ ವರ್ಷ ಪ್ರಕಟವಾದ ಕನ್ನಡದ ಶ್ರೇಷ್ಠವಾದ ಕಾವ್ಯ ಅಥವಾ ನಾಟಕ ಕೃತಿಗೆ ಪ್ರತಿವರ್ಷವೂ ಪ್ರತಿಷ್ಠಾನದ ವತಿಯಿಂದ ನೀಡಲಾಗುತ್ತಿದೆ. ಇದು 1998ನೆಯ ಇಸವಿಯಿಂದ ಪ್ರಾರಂಭವಾಯಿತು. ಹತ್ತು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಳ್ಳುವ ಈ ಪುರಸ್ಕಾರದೊಂದಿಗೆ ಈಗಾಗಲೇ ಅನೇಕ ಕನ್ನಡದ ಶ್ರೇಷ್ಠ ಸಾಹಿತಿಗಳು ಸನ್ಮಾನಿತರಾಗಿದ್ದಾರೆ.
ಪುತಿನ ಅವರು ಅಕ್ಷರಾಭ್ಯಾಸಮಾಡಿದ ಮೇಲುಕೋಟೆಯ ಶಾಲೆಗೆ ಶತಮಾನಗಳ ಇತಿಹಾಸವಿದೆ. ಆದರೆ ಅದು ಇಂದು 
ಶೋಚನೀಯ  ಸ್ಥಿತಿ ತಲುಪಿದೆ. ಪುತಿನ ಅವರಂತೆಯೇ ಖ್ಯಾತ ಪತ್ರಕರ್ತ ಖಾದ್ರಿ ಶಾಮಣ್ಣ, ಜಸ್ಟೀಸ್ ಶಿವಪ್ಪನವರಂತಹ ಹಲವು ಗಣ್ಯರಿಗೆ ಈ ಶಾಲೆ ವಿದ್ಯಾದಾನ ಮಾಡಿದ ಕೀರ್ತಿ ಈ ಶಾಲೆಗಿದೆ. ಇಲ್ಲಿ ಓದಿದ ಸಾವಿರಾರು ಮಂದಿ ಇಂದು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ದೊಡ್ಡ ದೊಡ್ಡ ಗಣ್ಯರಿಗೆ ವಿದ್ಯೆ ಕಲಿಸಿದ ಶಾಲೆಯಲ್ಲಿ ಇಂದು ಕನಿಷ್ಠ ಸೌಲಭ್ಯಗಳಿಲ್ಲದೆ ಇಂದು ಮಕ್ಕಳು ನೆಲದಲ್ಲಿ ಕುಳಿತು ಪಾಠಗಳನ್ನು ಕೇಳಿಸಿಕೊಳ್ಳುವಂತಾಗಿದೆ. ಈ ಶಾಲೆ ಇನ್ನೆಷ್ಟು ವಿದ್ವಾಂಸರನ್ನು, ಗಣ್ಯರನ್ನು ಹೊರತರಲಿದೆಯೋ ಯಾರು ಬಲ್ಲರು?
ಪುತಿನರವರ ವಿಚಾರಧಾರೆ ಮುಂದಿನ ಪೀಳಿಗೆಗೆ ಸ್ಫೂರ್ತಿನೀಡಲಿ. ಕನ್ನಡ ಸಾರಸ್ವತ ಲೋಕ ಸಮೃದ್ಧವಾಗಿಲಿ.
ವಿದೇಶಿ ಯಾತ್ರೆ


ಆಭಾರಿ:
^***^***^***^***^***^***^***^***^***^***^

1 comment:

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ReplyDelete